ಹೈದರಾಬಾದ್: ವಾರಂಗಲ್ ಅನ್ನು ಹೈದರಾಬಾದ್‌ಗೆ ಸಮನಾಗಿ ಅಭಿವೃದ್ಧಿಪಡಿಸಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಶನಿವಾರ ಹೇಳಿದ್ದಾರೆ ಮತ್ತು ನಗರದ ಸಮಗ್ರ ಅಭಿವೃದ್ಧಿಗೆ 'ಮಾಸ್ಟರ್ ಪ್ಲಾನ್-2050' ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಾರಂಗಲ್‌ಗೆ ಭೇಟಿ ನೀಡಿದ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಗ್ರೇಟರ್ ವಾರಂಗಲ್ ಮಹಾನಗರ ಪಾಲಿಕೆ (ಜಿಡಬ್ಲ್ಯುಎಂಸಿ) ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿದ ರೆಡ್ಡಿ, ಇದನ್ನು ಪಾರಂಪರಿಕ ನಗರವಾಗಿ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಒಳ ಮತ್ತು ಹೊರ ವರ್ತುಲ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಭೂಸ್ವಾಧೀನವನ್ನು ಪೂರ್ಣಗೊಳಿಸಲು ಮತ್ತು ಅದಕ್ಕೆ ಅಗತ್ಯವಿರುವ ಹಣದ ಬಗ್ಗೆ ಸಂಪೂರ್ಣ ವಿವರಗಳನ್ನು ಒದಗಿಸುವಂತೆ ಅವರು ಅವರಿಗೆ ತಿಳಿಸಿದರು.

ನಗರದ ಒಂದು ರಾಷ್ಟ್ರೀಯ ಹೆದ್ದಾರಿಯನ್ನು ಮತ್ತೊಂದು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರೀತಿಯಲ್ಲಿ ಉದ್ದೇಶಿತ ಹೊರ ವರ್ತುಲ ರಸ್ತೆಯನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳು ಅವರಿಗೆ ಸೂಚಿಸಿದರು.

ನಗರದ ಹೊರವರ್ತುಲ ರಸ್ತೆಯಿಂದ ಜವಳಿ ಪಾರ್ಕ್‌ಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

'ಸ್ಮಾರ್ಟ್ ಸಿಟಿ ಮಿಷನ್' ಅಡಿಯಲ್ಲಿ ಭೂಗತ ಒಳಚರಂಡಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು, ಕುಡಿಯುವ ನೀರಿನ ಪೈಪ್‌ಲೈನ್‌ಗಳನ್ನು ಹಾಕಲು ಮತ್ತು 'ನಾಲಾ' (ಡ್ರೈನ್) ಅತಿಕ್ರಮಣವನ್ನು ತಡೆಯಲು ಯೋಜನೆಗಳನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ವಾರಂಗಲ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಅಂದಾಜು ವೆಚ್ಚದಲ್ಲಿ ಏರಿಕೆಯಾಗುತ್ತಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಅನುಮೋದನೆ ಇಲ್ಲದೆ ಆಸ್ಪತ್ರೆ ನಿರ್ಮಾಣದ ಅಂದಾಜು ವೆಚ್ಚವನ್ನು 1,100 ಕೋಟಿ ರೂ.ಗಳಿಂದ 1,726 ಕೋಟಿ ರೂ.ಗೆ ಹೆಚ್ಚಿಸಿರುವ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರು. ಮೌಖಿಕ ಆದೇಶದ ಮೂಲಕ ಅಂದಾಜು ವೆಚ್ಚವನ್ನು 626 ಕೋಟಿ ರೂ.ಗಳಷ್ಟು ಹೆಚ್ಚಿಸುವುದು ಹೇಗೆ?, ಎಂದು ಅವರು ಪ್ರಶ್ನಿಸಿದರು.

ನಿರ್ಮಾಣ ವೆಚ್ಚದ ಕುರಿತು ಸಂಪೂರ್ಣ ವಿಧಿವಿಜ್ಞಾನ ಲೆಕ್ಕ ಪರಿಶೋಧನೆ ನಡೆಸುವಂತೆ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಖಾಸಗಿ ಆಸ್ಪತ್ರೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರ ತೆಲಂಗಾಣವನ್ನು ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುತ್ತಿದೆ.

ಸರ್ಕಾರವು 'ಡಿಜಿಟಲ್ ಹೆಲ್ತ್ ಪ್ರೊಫೈಲ್ ಕಾರ್ಡ್' ಒದಗಿಸಲು ಚಿಂತನೆ ನಡೆಸುತ್ತಿದೆ ಮತ್ತು ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ ಉಚಿತ ವೈದ್ಯಕೀಯ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.