ಮೋತಿಹಾರಿ, ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸಣ್ಣ ಸೇತುವೆ ಭಾನುವಾರ ಕುಸಿದು ಬಿದ್ದಿದ್ದು, ಬಿಹಾರದಲ್ಲಿ ಒಂದು ವಾರದೊಳಗೆ ಅಂತಹ ಮೂರನೇ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋತಿಹಾರಿಯ ಘೋರಸಹನ್ ಬ್ಲಾಕ್‌ನಲ್ಲಿ ಸಂಭವಿಸಿದ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಅಂವಾ ಗ್ರಾಮವನ್ನು ಬ್ಲಾಕ್‌ನ ಇತರ ಪ್ರದೇಶಗಳಿಗೆ ಸಂಪರ್ಕಿಸಲು ರಾಜ್ಯದ ಗ್ರಾಮೀಣ ಕಾಮಗಾರಿ ಇಲಾಖೆ (ಆರ್‌ಡಬ್ಲ್ಯೂಡಿ) ಕಾಲುವೆಯ ಮೇಲೆ 16 ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. 1.5 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

"ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಇದು ಗಂಭೀರ ವಿಷಯ ಮತ್ತು ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಆರ್‌ಡಬ್ಲ್ಯೂಡಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಸಿಂಗ್ ಹೇಳಿದ್ದಾರೆ.

''ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ವಿವರವಾದ ವರದಿಯನ್ನು ನಿರೀಕ್ಷಿಸಲಾಗಿದೆ,'' ಎಂದರು.

ಘಟನೆಗೆ ನಿಖರ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸೌರಭ್ ಜೋರ್ವಾಲ್ ಹೇಳಿದ್ದಾರೆ.

"ಸೇತುವೆಯ ಕೆಲವು ಪಿಲ್ಲರ್‌ಗಳ ನಿರ್ಮಾಣಕ್ಕೆ ಸ್ಥಳೀಯರ ಒಂದು ವಿಭಾಗವು ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ ಎಂದು ವರದಿಗಳಿವೆ. ಪೊಲೀಸರು ಈ ವಿಷಯವನ್ನು ಸಹ ಪರಿಶೀಲಿಸುತ್ತಿದ್ದಾರೆ" ಎಂದು ಅವರು ಹೇಳಿದರು .

ಶನಿವಾರ ಸಿವಾನ್ ಜಿಲ್ಲೆಯಲ್ಲಿ ಸಣ್ಣ ಸೇತುವೆಯೊಂದು ಕುಸಿದಿದೆ. ಇದನ್ನು ದಾರೌಂಡಾ ಮತ್ತು ಮಹಾರಾಜ್‌ಗಂಜ್ ಬ್ಲಾಕ್‌ಗಳ ಹಳ್ಳಿಗಳನ್ನು ಸಂಪರ್ಕಿಸುವ ಕಾಲುವೆಯ ಮೇಲೆ ನಿರ್ಮಿಸಲಾಗಿದೆ.

ಅದಕ್ಕೂ ಮುನ್ನ ಮಂಗಳವಾರ ಅರಾರಿಯಾ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಸುಮಾರು 180 ಮೀಟರ್ ಉದ್ದದ ಸೇತುವೆ ಕುಸಿದು ಬಿದ್ದಿತ್ತು.

ನದಿಗಳು ಮತ್ತು ಇತರ ಜಲಮೂಲಗಳ ಮೇಲೆ ನಿರ್ಮಿಸಲಾದ ದೊಡ್ಡ ಮತ್ತು ಸಣ್ಣ ಸೇತುವೆಗಳನ್ನು ಒಳಗೊಂಡ ಹಲವಾರು ಅವಘಡಗಳಿಗೆ ರಾಜ್ಯವು ಸಾಕ್ಷಿಯಾಗಿದೆ. ಇಂತಹ ಘಟನೆಗಳು ಸಾವು-ನೋವುಗಳಿಗೆ ಕಾರಣವಾಗದಿದ್ದರೂ, ಇದು ಸಾರ್ವಜನಿಕ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.